ಅಹಂಭಾವ
ಫ್ರಾಯಿಡ್‍ನ ಪ್ರಕಾರ ದೈಹಿಕ ಪ್ರೇರಣೆಗಳಾದ (ಇಡ್) ಹಸಿವು, ಬಾಯಾರಿಕೆ, ನಿದ್ರೆ ಮುಂತಾದುವನ್ನು ಒಂದು ಹತೋಟಿಯಲ್ಲಿಡುವ ಅಂಶ (ಈಗೊಯಿಸಂ).  ಈ ಹತೋಟಿ ಎರಡು ಬಗೆಯದು.  ಸುತ್ತಣ ಕಾಲ, ದೇಶ, ಸಾಮಾಜಿಕ ಪರಿಸರಗಳಿಗೆ ಹೊಂದಿ ನಡೆಯಬೇಕಾದಾಗ ವ್ಯಕ್ತಿ ತನ್ನ ಸಹಜಪ್ರವೃತ್ತಿಗಳ ಮೇಲೆ ಇಡುವ ಹತೋಟಿ ಒಂದು ಬಗೆಯದು.  ಉನ್ನತ ಧ್ಯೇಯಾದರ್ಶಗಳ ಪಾಲನೆಗಾಗಿ ಇಟ್ಟುಕೊಳ್ಳಬೇಕಾದ ಹತೋಟಿ ಎರಡನೆಯದು. 

ವ್ಯಕ್ತಿತ್ವದಲ್ಲಿನ ಒಂದು ಅಂಶವಾದ ದೈಹಿಕ ಪ್ರೇರಣೆಗಳನ್ನು ಕಾಲದೇಶಗಳ ಪರಿಸ್ಥಿತಿಗಳಿಗೂ ಸಾಮಾಜಿಕ ಕಟ್ಟುನಿಟ್ಟುಗಳಿಗೂ ಅನ್ವಯಿಸಿಕೊಂಡು ಸಫಲವನ್ನಾಗಿ ಮಾಡಿಕೊಳ್ಳಬೇಕಾದರೆ ವ್ಯಕ್ತಿಯಲ್ಲಿ ಅಹಮ್ಮಿನ ಅಂಶ ಬೆಳೆಯಬೇಕು.  ಹಾಗಾಗದಿದ್ದರೆ ದೈಹಿಕ ಪ್ರೇರಣೆಗಳಿಗೆ ತುತ್ತಾಗಿ ಬದುಕೇ ಅಸಾಧ್ಯವಾಗಬಹುದು.  ಅಂಬೆಗಾಲಿಕ್ಕುವ ಮಗು ಎಣ್ಣೆದೀಪಗಳನ್ನು ನೋಡಿದರೆ ಹರ್ಷದಿಂದ ಹೋಗಿ ಅದನ್ನು ಮುಟ್ಟಲು ಪ್ರಯತ್ನಿಸುವುದು.  ಜ್ವಾಲೆಯನ್ನು ಮುಟ್ಟಿ ಕೈಯನ್ನು ಸುಟ್ಟುಕೊಳ್ಳುವುದು.  ಒಮ್ಮೆ ಈ ಅನುಭವವಾದ ಮಗು ಜ್ವಾಲೆಯನ್ನು ಇನ್ನೊಂದು ಸಲ ಮುಟ್ಟಲು ಪ್ರಯತ್ನಿಸುವುದಿಲ್ಲ.  ಈ ವಿಧವಾಗಿ ಆ ಸಣ್ಣವಯಸ್ಸಿನಲ್ಲಿಯೇ ತನ್ನ ವಾತಾವರಣದಲ್ಲಿರುವ ವಸ್ತುಗಳ ಗುಣಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕ ಹಾಗೆ ವರ್ತಿಸುವುದು.  ಹೀಗೆಯೆ ತಾಯಿಯ ಕಟ್ಟುನಿಟ್ಟುಗಳನ್ನು ಈ ಸಣ್ಣ ವಯಸ್ಸಿನಲ್ಲೇ ಅರಿತುಕೊಳ್ಳುವುದು.  ಮಗುವಿಗೆ ಮೂರು ನಾಲ್ಕು ವರ್ಷಗಳ ವಯಸ್ಸು ಬರುವುದರೊಳಗಾಗಿ ತಾನು, ತನ್ನದು, ತನಗೆ ಎಂಬ ಅಂಶಗಳನ್ನು ಅರಿತುಕೊಳ್ಳುವುದು. 

ಇದೂ ಅಲ್ಲದೆ ತಂದೆತಾಯಿಗಳ ಸಾಮಾಜಿಕ ಕಟ್ಟುನಿಟ್ಟುಗಳನ್ನು ಮಗು ಅರ್ಥಮಾಡಿಕೊಳ್ಳುವುದು.  ಅವರು ಯಾವುದನ್ನು ಸರಿ, ಯಾವುದನ್ನು ತಪ್ಪು ಎಂದು ಹೇಳುವರೋ ಅದನ್ನು ಆಂತರೀಕರಣಮಾಡಿಕೊಂಡು, ತಾನೇ ಇದು ಒಳ್ಳಯದು, ಇದು ಕೆಟ್ಟದ್ದು ಎಂಬುದನ್ನರಿಯುವುದು.  ಈ ಅಂಶಕ್ಕೆ ಫ್ರಾಯಿಡ್--ಅಹಮಾದರ್ಶ(ಸೂಪರ್ ಈಗೊ) ಎಂದು ಹೇಳಿದ್ದಾನೆ.  ಈ ವಿಧವಾದ ಬಾಹ್ಯ ಆದರ್ಶಗಳನ್ನು ಆಂತರೀಕರಣಮಾಡಿಕೊಳ್ಳುವುದು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಬಹುಮುಖ್ಯವಾದ ಮೆಟ್ಟಲು.  ಈ ಮೆಟ್ಟಲನ್ನು ಸಣ್ಣ ಮಗು ಬಹಳ ಬಹಳ ಬೇಗ ಏರುವುದು.  ಸಾಧಾರಣವಾಗಿ ತನ್ನ ನಾಲ್ಕು ಐದನೆಯ ವರ್ಷದಲ್ಲಿ ಈ ವಿಧವಾದ ಆಂತರೀಕರಣವನ್ನು ಮಾಡಿಕೊಳ್ಳುವುದು. ಹೀಗೆ ಮಾಡಿಕೊಳ್ಳದಿರುವವರಲ್ಲಿ ಕೇಡುಗ ಪ್ರವೃತ್ತಿಗಳು ಹತೋಟಿಯಲ್ಲಿರುವುದಿಲ್ಲ.  ಇಂಥವರು ಆಡಿದ ಮಾತಿಗೆ ಬೆಲೆ ಕೊಡುವುದಿಲ್ಲ.  ಒಪ್ಪಿಕೊಂಡ ಕಾರ್ಯವನ್ನು ಏನೇ ಕಷ್ಟ ಬಂದರೂ ಮಾಡಲೇಬೇಕೆಂಬ ಮನೋಭಾವ ಇವರಲ್ಲಿ ಇರುವುದಿಲ್ಲ.  ಆದುದರಿಂದಲೇ ಇಂಥ ವ್ಯಕ್ತಿ ಸಮಾಜದಲ್ಲಿ ಉನ್ನತಸ್ಥಾನವನ್ನು ಪಡೆಯುವುದು ದುರ್ಲಭ.  ಅಂಥ ಸ್ಥಾನಗಳನ್ನು ಹೇಗಾದರೂ ಮಾಡಿ ಪಡೆಯಬೇಕೆಂದು ನೂರಾರು ಅಸತ್ಯಗಳನ್ನು ನುಡಿದು, ಅಕ್ರಮ ಕಾರ್ಯಗಳನ್ನು ಮಾಡುವರು. 

ಈ ವಿಧವಾಗಿ ಅಹಮಾದರ್ಶವನ್ನು ಪಡೆಯದಿರುವ ವ್ಯಕ್ತಿಗಳು ಸಮಾಜದಲ್ಲಿ ಅಪರಾಧಿಗಳಾಗುವರು ಅಥವಾ ಮನೋರೋಗಿಗಳಾಗುವರು.  ಅಂದರೆ ಸಮಾಜದಲ್ಲಿ ಸರಿಯಾಗಿ ಬಾಳಲು ಮಗು ನಾಲ್ಕಾರು ವರ್ಷಗಳು ಬರುವುದರೊಳಗೆ ತನ್ನ ಅಹಂಭಾವಕ್ಕೂ ಅಹಮಾದರ್ಶಕ್ಕೂ ಸರಿಯಾದ ಅಸ್ತಿಭಾರವನ್ನು ಹಾಕಿಕೊಳ್ಳಬೇಕಾಗುವುದು.  ಆ ವಯಸ್ಸಿನೊಳಗೆ ಈ ಅಸ್ತಿಭಾರ ಸರಿಯಾಗಿ ರೂಪುಗೊಳ್ಳದಿದ್ದರೆ ವ್ಯಕ್ತಿತ್ವ ಸರಿಯಾಗಿ ಬೆಳೆಯುವುದಿಲ್ಲ.

ಇದಲ್ಲದೆ ವ್ಯಕ್ತಿ ತಾನು ಸಾಯುವವರೆಗೂ ಉನ್ನತ ಆದರ್ಶಗಳನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು ಅವುಗಳ ಗುರಿಯನ್ನು ಸಾಧಿಸುವುದಕ್ಕೆ ಸತತವಾಗಿ ದುಡಿಯಬೇಕು.  ತನ್ನ ವ್ಯಕ್ತಿತ್ವದ ಬೆಳೆವಣಿಗೆ ಪೂರ್ತಿಯಾಯಿತೆಂದು ಯಾವ ಮಾನವನೂ ಹೇಳಲಸಾಧ್ಯ.  ಸತತವಾಗಿ ದುಡಿದ ಹೊರತು ವ್ಯಕ್ತಿತ್ವ ಪೂರ್ಣಗೊಳ್ಳುವುದಿಲ್ಲ.  		

ಅಹಮಾದರ್ಶವಿದ್ದರೆ ಅಪರಾಧ ಮನೋಭಾವ ಉಂಟಾಗುವುದು. ಇಲ್ಲದಿದ್ದರೆ ತಾನು ಮಾಡಿದ್ದೇ ಸರಿ ಎಂದು ಸಂತೃಪ್ತಿ ಹೆಚ್ಚಿ ಸರಿಯಾದ ವ್ಯಕ್ತಿತ್ವ ಬೆಳೆಯುವುದಿಲ್ಲ.  ಯಾವ ಕೆಲಸಮಾಡಬೇಕಾದರೂ ಅದು ಸರಿಯೇ ತಪ್ಪೇ ಎಂದು ವಿವೇಚಿಸಬೇಕು.  ಮಾಡಬಾರದ ಕೆಲಸವೆಂದು ತಿಳಿದೂ ಮಾಡಿದರೆ ಅಪರಾಧ ಮನೋಭಾವವುಂಟಾಗುವುದು.  ಇಂಥ ವ್ಯಕ್ತಿಗೆ ಅಹಮಾದರ್ಶ ದೃಢವಾಗಿ ಬೇರೂರಿಲ್ಲವೆಂದು ಹೇಳಬಹುದು.  ಇದು ಸರಿಯಾಗಿ ಬೇರೂರಿದ್ದರೆ ಒಮ್ಮೆ ಮಾಡಬಾರದ ಕೆಲಸವನ್ನು ಮಾಡಿದರೆ ಪುನಃ ಆ ಕೆಲಸವನ್ನು ಮಾಡಬೇಕೆಂಬ ಬಯಕೆಯನ್ನು ಅವರು ನಿಗ್ರಹಿಸುವರು. 

ಈ ವಿಧವಾಗಿ ಕೇವಲ ದೈಹಿಕಪ್ರೇರಣೆಗಳಿಗೆ ಅಧೀನವಾಗಿರುವ ಸಣ್ಣ ಮಗು ಬೆಳೆಯುತ್ತ ಬೆಳೆಯುತ್ತ ಯಥಾರ್ಥಜ್ಞಾನವನ್ನೂ ಪರಿಸರದ ಸಾಮಾಜಿಕ ಕಟ್ಟುನಿಟ್ಟುಗಳನ್ನೂ ಅರಿತು ಆದರ್ಶಗಳನ್ನು ಆಂತರೀಕರಣ ಮಾಡಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಪಡೆಯುವುದು.         
                                 
ಕೇಂದ್ರೀಕೃತ ಅಹಂಭಾವ : ಅಹಂಭಾವ ಬೆಳೆಯದೆ ವ್ಯಕ್ತಿತ್ವದ ಬೆಳೆವಣಿಗೆ ಅಸಾಧ್ಯವೆಂಬ ಮಾತನ್ನು ಒಪ್ಪಿದರೂ ಅಹಂಭಾವ ಕೇಂದ್ರೀಕೃತವಾದಾಗಿನ (ಈಗೊಸೆಂಟ್ರಿಸಂ) ಅಪಾಯಗಳಿಂದ ವ್ಯಕ್ತಿ ದೂರವಿರಬೇಕಾಗುತ್ತದೆ.  ಇತರ ವ್ಯಕ್ತಿಗಳನ್ನು ಗೌರವಿಸದೆ ಅವರೆಲ್ಲರೂ ತನ್ನ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೋಸ್ಕರವೇ ಇರುವರೆಂಬ ಮನೋಭಾವವೇ ಕೇಂದ್ರೀಕೃತ ಅಹಂಭಾವ. ಈ ಮನೋಧರ್ಮದ ವ್ಯಕ್ತಿ ತನಗೊದಗುವ ಪ್ರತಿಯೊಂದು ಪರಿಸ್ಥಿತಿಯನ್ನೂ ತನಗೆ ಅನುಕೂಲವೊ ಅಥವಾ ಅನನುಕೂಲವೊ ಎಂಬ ದೃಷ್ಟಿಯಿಂದಲೇ ಕಾಣುವನು.  ಎಲ್ಲವನ್ನೂ ತನ್ನ ಸ್ವಾರ್ಥಕ್ಕೋಸ್ಕರವೆಂದೇ ಎಣಿಸುವನು.  ಇಂಥ ವ್ಯಕ್ತಿ ತನ್ನ ಕುಟುಂಬಜೀವನದಲ್ಲೂ ಸಾಮಾಜಿಕ ಜೀವನದಲ್ಲಿಯೂ ಅನೇಕ ಕಷ್ಟಗಳಿಗೆ ಗುರಿಯಾಗಿ, ಇತರರಿಗೆ ಹಾನಿಯನ್ನುಂಟುಮಾಡುವನು. 

ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧಿಪೂರ್ವಕವಾಗಿ ಕೇಂದ್ರಿಕೃತ ಅಹಂಭಾವವನ್ನು ಕಡಿಮೆಮಾಡಿಕೊಳ್ಳುವುದು ಹಿತಕರವಾದುದು. ಏಕೆಂದರೆ ಕೇಂದ್ರೀಕೃತ ಅಹಂಭಾವದಿಂದ ಪರಾವಲಂಬನೆ ಮತ್ತು ಸ್ವಾರ್ಥ ಬೆಳೆಯುತ್ತವೆ. ಆದರ್ಶ ಜೀವನದೃಷ್ಟಿಯಿಂದ ಇವು ಸ್ವಾವಲಂಬನೆ ಮತ್ತು ಪರೋಪಕಾರಕ್ಕೆ ಎಡೆಗೊಡಬೇಕು.					
(ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ